ನಾಯ್ಡು, ಸಿ ಕೆ
1895-1967. ಭಾರತದ ಕ್ರಿಕೆಟ್ ಕ್ಷೇತ್ರದ ಭೀಷ್ಮ ಎಂದೇ ಖ್ಯಾತರಾದವರು. ಇವರ ಪೂರ್ಣ ಹೆಸರು ಕೊಟ್ಟಾರಿ ಕನಕಯ್ಯ ನಾಯ್ಡು ಎಂದು. ಹುಟ್ಟಿದ್ದು ಇಂದೂರಿನಲ್ಲಿ. 1895 ರ ಅಕ್ಟೋಬರ್ 31 ರಂದು. ಆರು ಅಡಿ ನೀಳಕಾಯದ ಇವರು ಕ್ರಿಕೆಟ್‍ನಲ್ಲಿ ಮಾತ್ರವಲ್ಲ ಟೆನಿಸ್, ಹಾಕಿ, ಬ್ರಿಜ್ ಮೊದಲಾದ ಕ್ರೀಡೆಗಳಲ್ಲಿಯೂ ಪರಿಣತರು. 1916 ರಿಂದಲೇ ಇವರು ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಇವರು ಭಾಗವಹಿಸಿದ ಕೊನೆಯ ಪಂದ್ಯ 1953 ರ ನವೆಂಬರ್ 30 ರಲ್ಲಿ ಜರುಗಿತು. ಆಗಿವರ ಪ್ರಾಯ 58.

1932 ರ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಅದ್ಭುತ ಆಟ ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿತು. ಅಲ್ಲಿ ಇವರು ಹೆಚ್ಚು ರನ್ ಪೇರಿಸಿದುದೇ ಅಲ್ಲದೇ 68 ವಿಕೆಟ್ ಪಡೆದರು.

1926-27 ರಲ್ಲಿ ಭಾರತಕ್ಕೆ ಬಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ಮುಂಬಯಿಯಲ್ಲಿ ಏರ್ಪಟ್ಟ ಪಂದ್ಯದಲ್ಲಿ ನಾಯ್ಡು ಒಂದೇ ಇನ್ನಿಂಗ್ಸ್‍ನಲ್ಲಿ 153 ರನ್ನುಗಳನ್ನು 100 ಮಿನಿಟ್‍ಗಳಲ್ಲಿ ಕೂಡಿಸಿದರು. ಅವರು ಬಾರಿಸಿದ 153 ರನ್ನುಗಳಲ್ಲಿ 13 ಬೌಂಡರಿಗಳಿದ್ದರೆ 11 ಸಿಕ್ಸರ್‍ಗಳಿದ್ದವು. ಕ್ರಿಕೆಟ್ ಪ್ರೇಮಿಗಳು ಇವರನ್ನು ಸಿಕ್ಸರ್ ನಾಯ್ಡು ಎಂದೇ ಕರೆದರು. ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಂತೆ ನಾಯ್ಡು ಬಾರಿಸಿದ ಚೆಂಡು ರಾಕೆಟ್‍ನಂತೆ ಹಾರುತ್ತಿತ್ತು. ಅನೇಕ ಕ್ರೀಡಾ ಪಟುಗಳು ಶತಕದ ಹತ್ತಿರ ಹತ್ತಿರ ಬಂದಾಗ ಶತಕ ಮಾಡುವುದು ತಪ್ಪಬಾರದೆಂದು ಅತ್ಯಂತ ಜಾಗರೂಕತೆಯಿಂದ ಆಡುವುದು ರೂಢಿ. ಆದರೆ ನಾಯ್ಡು ಅವರ ವೈಶಷ್ಟ್ಯವೆಂದರೆ ಬೌಂಡರಿಯಾಗಲಿ ಅಥವಾ ಸಿಕ್ಸರ್‍ಗಳಿಂದಾಗಿ ಶತಕ ಪೂರ್ಣಗೊಳಿಸುವುದು. ನಾಯ್ಡು ತಮ್ಮ ಕ್ರಿಕೆಟ್ ಜೀವನದಲ್ಲಿ 73 ಪ್ರಥಮ ದರ್ಜೆಯ ಆಟಗಳ ಮೂಲಕ 2567 ರನ್ನುಗಳನ್ನು ಪಡೆದರು. ಒಂದು ಇನ್ನಿಂಗ್ಸ್‍ನಲ್ಲಿ ಇವರ ಹೆಚ್ಚಿನ ರನ್‍ಗಳು ಎರಡು ಶತಕಗಳು. 1955 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ನಾಯ್ಡು ಅವರನ್ನು ಗೌರವಿಸಿತು.
ಮೆದುಳಿನ ರಕ್ತಸ್ರಾವದಿಂದ ನಾಯ್ಡು 1967ರ ನವೆಂಬರ್ 14 ರಂದು ತೀರಿಕೊಂಡರು.	
	 (ಎಸ್.ಎಚ್.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ